ಕೊಳವಳಿಕೆ

ಹೈಗ್ರೊಫಿಲ ಸ್ಟೈನೋಸ (ಪರ್ಯಾಯನಾಮ ಆಸ್ಟರಕ್ಯಾಂತ ಲಾಂಜಿಫೋಲಿಯ) ಎಂಬ ವೈಜ್ಞಾನಿಕ ಹೆಸರಿನ ಒಂದು ಸಾಮಾನ್ಯ ಮೂಲಿಕೆ ಸಸ್ಯ. ಅಕ್ಯಾಂತೇಸೀ ಕುಟುಂಬಕ್ಕೆ ಸೇರಿದೆ. ಕನ್ನಡದಲ್ಲಿ ಕೊಳವಂಕ, ಗೋಕಂಟಕ ಮುಂತಾದ ಹೆಸರುಗಳೂ ಇವೆ. ಭಾರತ ಮತ್ತು ಶ್ರೀಲಂಕಾಗಳ ಮೂಲನಿವಾಸಿ, ಭತ್ತದ ಗದ್ದೆಯ ಬದು, ಕೆರೆ, ನದಿಗಳ ದಂಡೆಗಳು ಮುಂತಾದ ನೀರಿರುವ ಸ್ಥಳಗಳಲ್ಲಿ ಸಾಮಾನ್ಯವಾಗಿ ಬೆಳೆಯುತ್ತದೆ.

	ಇದು ಸುಮಾರು 2'-3' ಎತ್ತರಕ್ಕೆ ಬೆಳೆಯುವ ಮುಳ್ಳುಗಿಡ. ಗೆಣ್ಣುಗಳಲ್ಲಿ ಸುತ್ತು ಜೋಡಣೆಯನ್ನು ಪ್ರದರ್ಶಿಸುವ 6 ಎಲೆಗಳೂ 6 ಉದ್ದನೆಯ ಮುಳ್ಳುಗಳೂ ಇವೆ. ಮುಳ್ಳುಗಳು ಹಿಂದಕ್ಕೆ ನಸುಬಾಗಿವೆ. ಎಲೆಗಳಿಗೆ ತೊಟ್ಟಿಲ್ಲ. ಎಲೆಗಳ ಕಂಕುಳಲ್ಲಿ ಗೆಣ್ಣನ್ನು ಸುತ್ತುವರಿದಂತೆ ಹೂಗಳು ಹುಟ್ಟುತ್ತವೆ. ಹೂಗಳಿಗೂ ತೊಟ್ಟಿಲ್ಲ. ಆದರೆ ಎಲೆಯನ್ನು ಹೋಲುವ ಉಪಪತ್ರಗಳಿವೆ. ಹೂಗಳು ದ್ವಿಲಿಂಗಿಗಳು : ಅವುಗಳ ಬಣ್ಣ ನೀಲಿಮಿಶ್ರಿತ ಊದಾ. ಪ್ರತಿಹೂವಿನಲ್ಲೂ 4 ಭಾಗವುಳ್ಳ ಸಂಯುಕ್ತ ಪುಷ್ಪಪತ್ರಾವರಣವೂ ಎರಡು ತುಟಿಗಳಾಗಿ ಭಾಗವಾಗಿರುವ ದಳಸಮೂಹವೂ 4 ಕೇಸರಗಳೂ ಎರಡು ಕಾರ್ಪೆಲುಗಳಿಂದ ಕೂಡಿದ ಅಂಡಾಶಯವೂ ಇವೆ. ದಳಸಮೂಹದ ಕೆಳದುಟಿಯ ಅಂಗಳದ ಮೇಲೆ ಉಬ್ಬಿಕೊಂಡಿರುವ ಎರಡು ಮಡಿಕೆಗಳಿವೆ. ಇರುವ 4 ಕೇಸರಗಳಲ್ಲಿ ಎರಡು ಮಿಕ್ಕವಕ್ಕಿಂತ ಗಾತ್ರದಲ್ಲಿ ದೊಡ್ಡವು. ಅಂಡಾಶಯದಲ್ಲಿ 2 ಕೋಣೆಗಳಿದ್ದು ಒಂದೊಂದು ಕೋಣೆಯಲ್ಲಿ 4 ಅಂಡಕಗಳಿವೆ. ಫಲ ಸಂಪುಟ ಮಾದರಿಯದು; ಉದ್ದುದ್ದವಾಗಿದೆ.

ಕೊಳವಳಿಕೆ ಗಿಡಕ್ಕೆ ಔಷಧೀಯ ಮಹತ್ತ್ವವಿದೆ. ಇದರ ಬೇರು, ಎಲೆ, ಬೀಜಗಳನ್ನು ಆಯುರ್ವೇದ ಔಷಧ ಪದ್ಧತಿಯಲ್ಲಿ ಬಳಸುತ್ತಾರೆ. ಬೇರು ಶಕ್ತಿವರ್ಧಕ, ಮೂತ್ರಸ್ರಾವ ಉತ್ತೇಜಕ, ಶಾಮಕ ಹಾಗೂ ತಂಪುಕಾರಕವೆನ್ನಲಾಗುತ್ತದೆ. ಬೀಜವೂ ಮೂತ್ರಸ್ರಾವ ಉತ್ತೇಜಕ. ಯುನಾನಿ ಔಷಧ ಪದ್ಧತಿಯಲ್ಲಿ ಇದನ್ನು ವಾಜೀಕರವೆಂದು ಪರಿಗಣಿಸಲಾಗಿದೆ. ಎಲೆಗಳು ಶಾಮಕ ಮತ್ತು ಮೂತ್ರಸ್ರಾವ ಉತ್ತೇಜಕಗಳು. ಬೇರಿನಿಂದ ತಯಾರಿಸಲಾಗುವ ಕಷಾಯವನ್ನು ಸಂಧಿವಾತ, ಗಾನರೀಯ ಮತ್ತು ಜನನಾಂಗ ಸಂಬಂಧಿ ಕಾಯಿಲೆಗಳ ನಿವಾರಣೆಗೆ ಬಳಸುವುದಿದೆ. ಎಲೆ ಮತ್ತು ಬೀಜಗಳನ್ನು ಕಾಮಾಲೆ ರೋಗನಿವಾರಣೆಗೆ ಉಪಯೋಗಿಸುತ್ತಾರೆ. ನೆಗ್ಗಿಲು ಮುಳ್ಳಿನಗಿಡ ಮತ್ತು ಶತಾವರಿಯೊಂದಿಗೆ ಕೊಳವಳಿಕೆಯ ಬೀಜಗಳನ್ನು ಸೇರಿಸಿ ತಯಾರಿಸಿದ ಪುಡಿಯನ್ನು ಹಸುವಿನ ಹಾಲು ಮತ್ತು ಸಕ್ಕರೆಯೊಂದಿಗೆ ಬೆರೆಸಿ ಶಕ್ತಿವರ್ಧಕವಾಗಿ ಉಪಯೋಗಿಸಬಹುದು. ಅಲ್ಲದೆ ಬೀಜಗಳ ಪುಡಿಯನ್ನು ಜೇನುತುಪ್ಪ ಹಾಗೂ ತುಪ್ಪದೊಂದಿಗೆ ಮಿಶ್ರಮಾಡಿ ಉಬ್ಬಸವನ್ನು ತಡೆಯಲು ಬಳಸುತ್ತಾರೆ. ಬೀಜಗಳನ್ನು ಅರೆದು ಮಜ್ಜಿಗೆಯೊಂದಿಗೆ ಸೇರಿಸಿ ಅತಿಸಾರ ನಿವಾರಕವಾಗಿ ಬಳಸುವುದುಂಟು.
(ಎಚ್.ಕೆ.ಎಂ.; ಎಚ್.ಎಸ್.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ